ಛಂದಸ್ಸು
ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯದ ಆರಂಭದ ದಿನಗಳಿಂದಲೂ ಬಳಕೆಯಲ್ಲಿದ್ದು, ಕಾಲಕ್ರಮದಲ್ಲಿ ಹಲವಾರು ಪರಿಷ್ಕರಣೆಗೊಳಪಟ್ಟಿದೆ.
ಛಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ: 1. ಪ್ರಾಸ 2. ಯತಿ 3. ಗಣ
1. ಪ್ರಾಸ: ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸ.
ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೆಯ ಸ್ವರಗಳ ನಡುವೆ ಬರುವ ಪ್ರಾಸ ಆದಿಪ್ರಾಸ.
ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವು ಮಧ್ಯಪ್ರಾಸ. ಇದು ಸಾಮಾನ್ಯವಾಗಿ ಮೊದಲ ಸಾಲಿನಲ್ಲಿ, ಅದರಲ್ಲೂ ವಿಶೇಷವಾಗಿ ತ್ರಿಪದಿಗಳಲ್ಲಿ ಕಂಡುಬರುತ್ತದೆ.
ಹಾಗೆಯೇ, ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯಪ್ರಾಸ.
2. ಯತಿ: ಯತಿ ಎಂದರೆ ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ.
3. ಗಣ: ಗಣ ಎಂದರೆ ಗುಂಪು. ಛಂದಸ್ಸಿನಲ್ಲಿ ಮಾತ್ರಾಗಣ, ಅಕ್ಷರಗಣ ಮತ್ತು ಅಂಶಗಣಗಳೆಂಬ ಮೂರು ವಿಧದ ಗಣಗಳಿವೆ.
ಮಾತ್ರಾಗಣ: ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
ಮಾತ್ರೆ: ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.
ಲಘು: ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.
ಗುರು: ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( - ) ಎಂದು ಕರೆಯುವರು.
ಪ್ರಸ್ತಾರ: ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.
ಅಕ್ಷರವು ಗುರು ಎನಿಸುವ ಲಕ್ಷಣಗಳು
ಲಕ್ಷಣಉದಾಹರಣ
ದೀರ್ಘಾಕ್ಷರ_ U ಶಾಲೆ
ಒತ್ತಕ್ಷರದ ಹಿಂದಿನ ಅಕ್ಷರ_ U U U ಒ ತ್ತಿ ನ ಣೆ
ಅನುಸ್ವಾರದಿಂದ ಕೂಡಿರುವ ಅಕ್ಷರ_ U U ಬಂ ದ ನು
ವಿಸರ್ಗದಿಂದ ಕೂಡಿರುವ ಅಕ್ಷರ_ U ದುಃಖ
ವ್ಯಂಜನಾಕ್ಷರದಿಂದ ಕೂಡಿದ ಅಕ್ಷರU U _ ಮನದೊಳ್
ಐ ಸ್ವರವಿರುವ ಅಕ್ಷರ_ U U ಕೈ ಮು ಗಿ
ಔ ಸ್ವರವಿರುವ ಅಕ್ಷರ_ U ಮೌ ನ
ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ
ಅಕ್ಷರವು ಲಘು ಎನಿಸುವ ಲಕ್ಷಣಗಳು
ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.
ಮಾತ್ರಾಗಣ ಆಧಾರಿತ ಛಂದಸ್ಸುಗಳು
ಕಂದ ಪದ್ಯ
ಕಂದ ಪದ್ಯ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರದ ಛಂದಸ್ಸಾಗಿದೆ. ಕನ್ನಡದ ಅನೇಕ ಕವಿಗಳು ವಿಫುಲವಾಗಿ ಇದನ್ನು ಬಳಸಿಕೊಂಡಿದ್ದಾರೆ. ಇದು ಚತುರ್ಮಾತ್ರಾಗಣಗಳ ಗತಿಯಲ್ಲಿ ಬರುವ ಪ್ರಕಾರವಾಗಿದೆ. ಇದರಲ್ಲಿ ಮೊದಲ ಸಾಲಿನಲ್ಲಿ ಮೂರು ಗಣಗಳೂ ಎರಡನೇ ಸಾಲಿನಲ್ಲಿ ಐದು ಗಣಗಳೂ ಪುನಃ ಮೂರನೇ ಸಾಲಿನಲ್ಲಿ ಮೂರು ಗಣಗಳೂ ನಾಲ್ಕನೇ ಸಾಲಿನಲ್ಲಿ ಐದು ಗಣಗಳೂ ಇರುತ್ತವೆ. ಎಲ್ಲಾ ಗಣಗಳು ನಾಲ್ಕು ಮಾತ್ರೆಗಳಿಗೆ ವಿಭಾಗಿಸಲ್ಪಟ್ಟಿರುತ್ತವೆ. ಅದನ್ನು ಹೀಗೆ ತೋರಿಸಬಹುದು.
೪ + ೪ + ೪ + ೪ + ೪ =20
೪ + ೪ + ೪ + ೪ + ೪ =20
೪ + ೪ + ೪ =12
೪ + ೪ + ೪ + ೪ + ೪ =20
ಕಂದದ ನಿಯಮಗಳು:
1.ಇದರಲ್ಲಿ ವಿಷಮ ಸ್ಥಾನಗಳಲ್ಲಿ ಅಂದರೆ 1,3,5,7 ಹಾಗೇ 9,11,13,15 ನೇ ಗಣಗಳಲ್ಲಿ ಜಗಣ ಅಂದರೆ ಮಧ್ಯಗುರು ಇರುವ U_U ವಿನ್ಯಾಸ ಬರಬಾರದು
2. ಎರಡನೇ ಹಾಗೂ ನಾಲ್ಕನೇ ಸಾಲಿನ ಕೊನೆಯ ಗಣವು ಅಂತ್ಯಗುರುಯುಕ್ತವಾಗಿರಬೇಕು. ಅಂದರೆ UU_ ಅಥವಾ __ ಈ ವಿನ್ಯಾಸಗಳು ಬರಬಹುದು.
3. 6ನೇ ಹಾಗೂ 14ನೇ ಗಣಗಳು ಮಾತ್ರ ಮಧ್ಯ ಗುರು ಇರುವ ಜಗಣ ವಿನ್ಯಾಸ (U_U) ಅಥವಾ ಸರ್ವಲಘುಗಳಿರುವ ವಿನ್ಯಾಸ (U,UUU) ಬರಬಹುದು. ಸರ್ವಲಘುಗಳಿರುವ ವಿನ್ಯಾಸ ಬಂದಲ್ಲಿ ಮೊದಲ ಅಕ್ಷರದ ನಂತರ ಯತಿ ಬರಲೇಬೇಕು.
4. ಉಳಿದ ಗಣಗಳಲ್ಲಿ ಯಾವ ರೀತಿಯ ವಿನ್ಯಾಸ ಬೇಕಾದರೂ ಬರಬಹುದು.
ಉದಾಹರಣೆ:
U U U U | _ _ |U U U U |
ಒಡೆಯಲ |ಜಾಂಡಂ | ಕುಲಗಿರಿ |
U U _ | U U_|U _ U|UU_| U U_|
ಕೆಡೆಯಲ್| ಪಿಳಿಯ|ಲ್ಕೆ ಧಾತ್ರಿ|ದಿವಿಜರ್| ನಡುಗ-|
U U U U| U _U | _ U U|
ಲ್ಕೊಡರಿಸು |ವಿನಂ ಜ | ಟಾಸುರ|
U _ U| UU_|U_U | _ _|__|
ಹಿಡಿಂಬ | ಬಕವೈ|ರಿ ಸಿಂಹ|ನಾದಂ| ಗೆಯ್ದಂ||
ಈ ಪದ್ಯ ರಚನೆಯ ಕುರಿತ ವಿಡಿಯೋ ಹಾಗೂ ವಿವರಗಳನ್ನು ಪದ್ಯಪಾನ ಜಾಲದಲ್ಲಿಯೂ ನೋಡಬಹುದು.ಕಂದಪದ್ಯ ರಚನೆಗೆ ಪ್ರಯತ್ನಿಸಲು ಕೂಡ ಈ ವಿಡಿಯೋ ಸಹಕಾರಿಯಾಗಿದೆ.
ಷಟ್ಪದಿ
ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ. ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸುಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ.೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದ ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.
ಕನ್ನಡ ಸಾಹಿತ್ಯದಲ್ಲಿ ಷಟ್ಪದಿ: ಕನ್ನಡ ಕಾವ್ಯದಲ್ಲಿ ಷಟ್ಪದಿಗಳನ್ನು ರಾಘವಾಂಕನು ಬಳಕೆಗೆ ತಂದನು. ಹಳಗನ್ನಡ ಸಾಹಿತ್ಯದಲ್ಲಿ ಕಂದ, ಖ್ಯಾತ ಕರ್ನಾಟಕ ವೃತ್ತಗಳು, ಹೇರಳವಾಗಿದ್ದರೆ ನಡುಗನ್ನಡ ಕಾಲದ ಸಾಹಿತ್ಯದಲ್ಲಿ ಷಟ್ಪದಿಗೆ ಮೊದಲ ಸ್ಥಾನ. ಕುಮಾರವ್ಯಾಸನ 'ಗದುಗಿನ ಭಾರತ'ವೆಂದೆ ಪ್ರಸಿದ್ಧವಾಗಿರುವ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶಕವಿಯ ಜೈಮಿನಿ ಭಾರತ ಇವೆರಡೂ ಷಟ್ಪದಿ ಕಾವ್ಯಗಳೆ. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿ.
ಕನ್ನಡ ಸಾಹಿತ್ಯದಲ್ಲಿ ಬಳಕೆಯಲ್ಲಿದ್ದ ಷಟ್ಪದಿಗಳು ಇವು: 1. ಶರ 2. ಕುಸುಮ 3. ಭೋಗ 4. ಭಾಮಿನೀ 5. ವಾರ್ಧಕ 6. ಪರಿವರ್ಧಿನೀ
0 Comments